ಪ್ಯಾರಾದಳಗಳು -
 	ಪ್ಯಾರಾಶೂಟ್ ಬಳಸಿ ವಿಮಾನದಿಂದ ನೆಲಕ್ಕೆ ದುಮುಕಿ ಮುಂದೆ ಯುದ್ಧಕ್ರಿಯೆ ಜರುಗಿಸಲು ಶಿಕ್ಷಣ ಪಡೆದಿರುವ ಯೋಧಸಮುಚ್ಚಯ (ಪ್ಯಾರಾ ಟ್ರೂಪ್ಸ್). ಪ್ಯಾರಾಶೂಟ್ ನೆರವಿನಿಂದ ಶತ್ರು ವಲಯದ ಹಿನ್ಸಾಲಿನಲ್ಲಿ ಗುಪ್ತವಾಗಿ ಇಳಿದು ಮಿತ್ರಬಲಗಳಿಗೆ ಹೊಸ ನೆಲೆ ಒದಗಿಸಿಕೊಡುವ ಸಾಹಸಿಗರಿಗೆ ಪ್ಯಾರಾ ಯೋಧರೆಂದು (ಪ್ಯಾರಾಟ್ರೂಪರ್ಸ್) ಹೆಸರು. 

ಹಕ್ಕಿಯಂತೆ ಹಾರಬೇಕೆಂದು ಆರಂಭದಿಂದಲೂ ಮಾನವನ ಹಂಬಲ. ಆದರೆ ಈ ಒಡಲಿಗೆ ಕೈಗೂಡದ ಬಯಕೆ ಅದು. ಒಂದು ಅರ್ಥದಲ್ಲಿ ಬಲೂನ್ (ನೋಡಿ- ಬಲೂನ್) ಇದಕ್ಕೆ ಗರಿ ಮೂಡಿಸಿತು. ಇದರ ನೆರವಿನಿಂದ ಮಾನವ ವಾಯುಮಂಡಲದಲ್ಲಿ ತೇಲಬಲ್ಲವನಾಗಿದ್ದ. ಬಹುತೇಕ ನೆಲದಿಂದ ಎತ್ತರಕ್ಕೆ ಗಾಳಿ ಒಯ್ದಲ್ಲಿಗೆ ಸಾಗಿ ಬೇರೆಲ್ಲೋ ಇಳಿವ ಒಂದು ತೆರನಾದ ಆಟವಿದು. ಇಲ್ಲಿಯ ನಿರ್ಣಾಯಕ ಪಾತ್ರ ಗಾಳಿಯದು ಅಂದ ಮೇಲೆ ಬಲೂನಿನದಕ್ಕೆ ವಿಪರ್ಯಯವಾದ ಚಲನೆಗೆ-ಎತ್ತರದಿಂದ ತಗ್ಗಿಗೆ ಧುಮುಕುವ ಚಲನೆಗೆ-ಯಾವ ಸಲಕರಣೆ ಬಳಸಬಹುದು? ಹೀಗೆ ಯೋಚನಾ ಲಹರಿ ಹರಿಯುತ್ತಿದ್ದಾಗ ಪ್ಯಾರಾಶೂಟಿನ ಕಲ್ಪನೆ ಸ್ಪುರಿಸಿದ್ದಿರಬಹುದು. ವಿಮಾನ ಹಾರಾಟ ವಾಸ್ತವಿಕ ಸತ್ಯವಾದಾಗ ಪ್ಯಾರಾಶೂಟ್ ದುಮುಕಾಟ ಅನಿವಾರ್ಯ ಅಗತ್ಯವಾಯಿತು. 

ಪ್ರಸಕ್ತ ಶತಮಾನದ ಆದಿಯಲ್ಲಿ ಫ್ರೆಂಚರೂ ಬ್ರಿಟಿಷರೂ ಕಾರ್ಯಶೀಲ ಪ್ಯಾರಾಶೂಟಿನ ನಿರ್ಮಾಣದಲ್ಲಿ ಉದ್ಯುಕ್ತರಾಗಿದ್ದರು. ವಿಮಾನದಿಂದ ನೆಲಕ್ಕೆ ಸಾವಧಾನವಾಗಿ ಸರಿಯುವುದು ಉದ್ದೇಶ. ಇದಾದರೂ ರಕ್ಷಣೋಪಾಯವಾಗಿ ಮಾತ್ರ. ಯುದ್ಧಸಾಧನವಾಗಿ ಪ್ಯಾರಾಶೂಟ್ ಉಪಯೋಗವಾದೀತೆಂದು ಮೊದಲಿಗೆ ಮನಗಂಡು ಆ ದಿಶೆಯಲ್ಲಿ ಕಾರ್ಯ ಪ್ರವೃತ್ತರಾದವರು (1930) ರಷ್ಯನರು. ಅವರು ತಮ್ಮ ಸೇನಾಬಲಗಳಲ್ಲಿ ಪ್ಯಾರಾದಳಗಳ ಒಂದು ಅಂಗವನ್ನು ಸ್ಥಾಪಿಸಿದರು. ಆದರೆ ಇತರ ಅನೇಕ ಸದೃಶ ಸನ್ನಿವೇಶಗಳಲ್ಲಿ ಸಂಭವಿಸಿದಂತೆ ಇಲ್ಲಿಯೂ ಜರ್ಮನರು ಅಧಿಕ ಪ್ರವರ್ತನಶೀಲತೆ ಪ್ರದರ್ಶಿಸಿ ಇತರ ಎಲ್ಲ ರಾಷ್ಟ್ರಗಳಿಗಿಂತ ಮುಂದೆಮುಂದೆ ನಡೆದರು. ಎರಡನೆಯ ಮಹಾಯುದ್ಧದ ವೇಳೆಗೆ ಜರ್ಮನಿಯಲ್ಲಿ ಮಾತ್ರ ವ್ಯವಸ್ಥಿತ ಪ್ಯಾರಾದಳ ಇದ್ದುದಾಗಿತ್ತು. ಹರ್ಮನ್ ಗೋರಿಂಗನ ದೂರದೃಷ್ಟಿಯ ಫಲವಿದು. 

ವಿಶಾಲ ನದಿ, ದುರ್ಗಮ ಪರ್ವತ ಶ್ರೇಣಿ, ಬಲಿಷ್ಠ ಶತ್ರು ಸೇನಾವ್ಯೂಹ ಮುಂತಾದ ಅಡಚಣೆಗಳನ್ನು ವೈರಿಯ ದೃಷ್ಟಿಗೆ ಬೀಳದೆ ಅಡ್ಡ ಹಾಯ್ದು ಉದ್ದಿಷ್ಟ ಗುರಿ ತಲಪಿ ಮಿತ್ರ ಸೇನೆಗಳಿಗೆ ನೆರವಾಗಲು ಅಥವಾ ನೆರವು ಒದಗಿಸಲು ಪ್ಯಾರಾಶೂಟ್ ದಳವನ್ನು ನಿಯೋಗಿಸುವುದು ವಾಡಿಕೆ. ಇಕ್ಕಟ್ಟು ಪ್ರದೇಶದಲ್ಲಿರುವ ಒಂಟಿ ಸೇತುವೆ, ಬೆಟ್ಟ ಸಾಲಿನಲ್ಲಿರುವ ತೆರಪು ಮುಂತಾದವು ಅಂಥ ಅಡಚಣೆಗಳು. ಶತ್ರುವಲಯದಲ್ಲಿ ಕಡಲ ಹಾಸಿನ ಮೂಲಕ ತೇಲಿ ಆತನ ರೇವಿನ ಮೇಲೆ ದಾಳಿ ಹೂಡಲು ಯೋಜಿಸಿದಾಗ ಮಿತ್ರ ಬಲಗಳಿಗೆ ದಂಡೆಯಿಂದ ರಕ್ಷಣೆ ಒದಗುವುದಾಗಲಿ ಮಾಹಿತಿ ಲಭಿಸುವುದಾಗಲಿ ಅನೂಹ್ಯ ಆಕಸ್ಮಿಕಗಳು. ಇಂಥಲ್ಲಿ ಪ್ಯಾರಾದಳಗಳ ಮುಂಚೂಣಿ ನೆರವು ಜಯನಿರ್ಣಾಯಕವೇ ಆಗಬಲ್ಲದು. ಮಿತ್ರ ನೌಕೆಗಳು ಸಾಗರಯಾನ ಮಾಡಿ ಶತ್ರುದಂಡೆ ತಲುಪುವ ಮೊದಲೇ ಪ್ಯಾರಾಯೋಧರು ಅಲ್ಲಿ ಇಳಿದು ಮಾರ್ಗದರ್ಶನ ನೀಡುವುದು ಸಾಧ್ಯವಿದೆ. ನಾರ್ಮಂಡಿ ಕದನದಲ್ಲಿ (1944) ಪ್ಯಾರಾಯೋಧರು ವಹಿಸಿದ ಪಾತ್ರ ಉಲ್ಲೇಖಾರ್ಹ. 

ಬೆಲ್ಜಿಯಮಿನಲ್ಲಿ ಒಂದು ಕೋಟೆಯನ್ನು ಸ್ವಾಧೀನಪಡಿಸಿಕೊಳ್ಳಲು ಜರ್ಮನರು ಪ್ಯಾರಾದಳಗಳನ್ನು ಬಳಸಿದ್ದರಾದರೂ (1940) ಮೊದಲ ಯಶಸ್ವೀ ಪ್ಯಾರಾ ದ್ವಾರಾಯುದ್ಧಾಚರಣೆಗಳನ್ನು ಜರ್ಮನರು ನಿರ್ವಹಿಸಿದ್ದು ಮರುವರ್ಷ (1941) ಮಾತ್ರಕ್ರೀಟ್‍ನಲ್ಲಿ (ಗ್ರೀಸಿನ ದಕ್ಷಿಣಕ್ಕೆ) ಪ್ಯಾರಾದಳಗಳ ಸ್ಥಾಪನೆಯಲ್ಲಿ ಮೊದಲಿಗರಾದ ರಷ್ಯನರು ಆ ದಿಶೆಯಲ್ಲಿ ವಿಶೇಷ ಪ್ರಗತಿ ಏನನ್ನೂ ಸಾಧಿಸಿದ್ದುದೊಂದು ಚೋದ್ಯ. ಎರಡನೆಯ ಮಹಾಯುದ್ಧ ಮುಗಿಯುವ ವೇಳೆಗೆ ಗ್ರೇಟ್ ಬ್ರಿಟನ್ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳು ಸಮರ್ಥ ಪ್ಯಾರಾದಳಗಳನ್ನು ಹೊಂದಿದ್ದು ವ್ಯಾಪಕವಾಗಿ ಅವನ್ನು ನಿಯೋಗಿಸುವಲ್ಲಿ ಪರಿಣತಿಗಳಿಸಿದ್ದವು. 

ಪ್ಯಾರಾದಳಗಳ ಬಳಕೆಯಲ್ಲಿ ಗಮನಿಸಬೇಕಾದ ಪ್ರಧಾನ ಸೂತ್ರಗಳು ಎರಡು. ಮೊದಲನೆಯದಾಗಿ ವೈಮಾನಿಕ ಸನ್ನಿವೇಶ ಅನುಕೂಲವಾಗಿರಬೇಕು. ಪ್ಯಾರಾ ಯೋಧರನ್ನು ಸಾಗಿಸುವ ವಿಮಾನಗಳು ಯುದ್ಧ ವಿಮಾನಗಳಲ್ಲವಾದ್ದರಿಂದ ಸ್ವರಕ್ಷಣೆ ಮಾಡಿಕೊಳ್ಳಲಾರವು. ವಾಯು ಸನ್ನಿವೇಶ ಅನುಕೂಲವಾಗಿಲ್ಲದಾಗ ಅವು ಶತ್ರು ತಾಡನೆಗೆ ಸುಲಭ ಬಲಿಯಾಗುವ ಅಪಾಯವಿದ್ದದ್ದೇ ಅಲ್ಲದೆ ಪ್ಯಾರಾಯೋಧರು ನೆಲಕ್ಕೆ ಬೀಳುತ್ತಿರುವ ವೇಳೆ ಪೂರ್ತಿ ನಿಸ್ಸಹಾಯಕರಾಗಿರುತ್ತಾರೆ. ಈ ಕಾರಣಕ್ಕಾಗಿ ಪ್ಯಾರಾದಳಗಳ ರಂಗವಿತರಣೆ (ಡೀಪ್ಲಾಯ್ಮೆಂಟ್) ರಾತ್ರಿ ವೇಳೆ ಜರುಗುವುದೇ ವಾಡಿಕೆ. ಉದಾಹರಣೆಗೆ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ಪ್ಯಾರಾಯೋಧರು ಇಳಿಯುವ ಮೊದಲೇ ಅವರನ್ನು ಹೊಡೆದುರುಳಿಸಲಾಯಿತು.

ಎರಡನೆಯದಾಗಿ ವಾಯುದ್ವಾರ ಬಂದಿಳಿಯುವ ದಳಗಳು ಹೆಚ್ಚು ಕಾಲ ತಮ್ಮ ನೆಲೆಯನ್ನು ಹಿಡಿದು ನಿಂತಿರುವುದು ಕಡುಕಠಿನ. ಟ್ಯಾಂಕ್ ಬೆಂಬಲವಿರದ ಇವು ಬಲುಬೇಗ ಶತ್ರುವಿನ ಹತಿಗೆ ಆಹುತಿಯಾಗುವುದು ನಿರೀಕ್ಷಿತವೇ. ಅಂದ ಮೇಲೆ ಟ್ಯಾಂಕ್ ಸಜ್ಜಿತ ನೆಲಬಲಗಳು ಬಲು ಬೇಗ ಇವುಗಳ ರಕ್ಷಣೆಗೆ ಧಾವಿಸಬೇಕೆಂಬುದು ಸ್ಪಷ್ಟ. ಹೆಚ್ಚೆಂದರೆ 24 ಗಂಟೆಗಳ ಅವಧಿ ತನಕ ಮಾತ್ರ ಪ್ಯಾರಾಬಲಗಳು ತಮ್ಮ ನೆಲೆಯನ್ನು ಕಾಯ್ದಿಟ್ಟುಕೊಂಡಿರಬಲ್ಲವು. ಉದಾಹರಣೆಗೆ ಹಾರನ್ಹೀಮ್ ಯುದ್ಧಾಚರಣೆಗಳ ವೈಫಲ್ಯವನ್ನು (1945) ಗಮನಿಸಬಹುದು. ಪ್ಯಾರಾದಳಗಳು ಹಿಡಿದುಕೊಂಡಿದ್ದ ಸೇತುವೆಗೆ ಬ್ರಿಟಿಷ್ (ಎರಡನೆಯ) ಸೈನ್ಯ ಸಕಾಲದಲ್ಲಿ ತಲಪಲಾಗಲಿಲ್ಲ. ಅಷ್ಟರಲ್ಲಿ ಜರ್ಮನ್ ಟ್ಯಾಂಕುಗಳು ಸೇತುವೆಯನ್ನು ಧ್ವಂಸಗೊಳಿಸಿದ್ದವು. 

ಟ್ಯಾಂಕುಗಳನ್ನೂ ಕ್ಷಿಪಣಿಗಳನ್ನೂ ಹೊತ್ತ ಹಿರಿ ಸಾಗಣೆ ವಿಮಾನದಲ್ಲಿ ಪ್ಯಾರಾದಳಗಳನ್ನು ರವಾನಿಸುವುದು ಇಂದಿನ ಯುದ್ಧನೀತಿ. ಹೀಗೆ ಈ ಕನಿಷ್ಠ ಸ್ವರಕ್ಷಣಾ ಸಾಧನಗಳ ಸಮೇತ ಇಳಿವ ಪ್ಯಾರಾಯೋಧರು ನೆಲ ಬೆಂಬಲ ತಮ್ಮನ್ನು ತಲಪುವ ತನಕ ಇನ್ನಷ್ಟು ಭದ್ರವಾಗಿ ನೆಲೆಗೆ ಅಂಟಿಕೊಂಡಿರುವುದು ಸಾಧ್ಯವಾಗುತ್ತದೆ. ಕೂಟ ಯುದ್ಧದಲ್ಲಿ (ಗ್ವೆರಿಲ್ಲಾ ವಾರ್ಫೇರ್) ಪ್ಯಾರಾಬಲಗಳ ಪಾತ್ರ ಪ್ರಧಾನವಾಗಿದೆ.
(ಎ.ಸಿ.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ